ಪೂರ್ವಮೀಮಾಂಸಾ	 -
	ಭಾರತೀಯ ಷಡ್ದರ್ಶನಗಳಲ್ಲಿ ಅತ್ಯಂತ ಪ್ರಾಚೀನವೂ ಪೂಜ್ಯವೂ ಆದುದು. ಇದಕ್ಕೆ ಕರ್ಮ-ಮೀಮಾಂಸೆ ಧರ್ಮ-ಮೀಮಾಂಸೆ ಯಜ್ಞ-ಮೀಮಾಂಸೆ ಎಂಬ ನಾಮಾಂತರಗಳು. ವೇದ ಸಾಹಿತ್ಯವನ್ನು ಕರ್ಮಕಾಂಡ, ಜ್ಞಾನಕಾಂಡ ಎಂದು ಎರಡು ವಿಭಾಗ ಮಾಡಿದಾಗ ಬ್ರಾಹ್ಮಣಗಳೆಲ್ಲ ಕರ್ಮಕಾಂಡವೆನಿಸುತ್ತವೆ. ಉಪನಿಷತ್ತುಗಳು ಜ್ಞಾನಕಾಂಡವೆನಿಸುತ್ತವೆ. ಮೀಮಾಂಸೆ ಎಂದರೆ ಜಿಜ್ಞಾಸೆ ಅಥವಾ ವಿವೇಚನೆ, ಕರ್ಮ, ವಿಧಿ, ಅದೃಷ್ಟ, ಧರ್ಮ, ವಾಕ್ಯಾರ್ಥ, ತಾತ್ಪರ್ಯ ಲಿಂಗಗಳು, ಶಬ್ದಶಕ್ತಿಗಳು, ವೇದದ ಅಪೌರುಷೇಯತ್ವ ಮತ್ತು ಸ್ವತಃಪ್ರಾಮಾಣ್ಯ, ಪ್ರಮಾಣಗಳು-ಇವೇ ಮುಂತಾದ ವೈದಿಕ ದರ್ಶನದ ಮೂಲಭೂತ ಪ್ರಕ್ರಿಯೆಗಳನ್ನೆಲ್ಲ ಈ ದರ್ಶನದಲ್ಲಿ ಕೂಲಂಕಷವಾಗಿಯೂ ಶಾಸ್ತ್ರೀಯವಾಗಿಯೂ ವಿವೇಚಿಸಲಾಗಿದೆ. ಹಿಂದೂ ಧರ್ಮಶಾಸ್ತ್ರದಲ್ಲಿ ಅನೇಕ ಜಟಿಲ ಸಮಸ್ಯೆಗಳನ್ನು ಪರಿಹರಿಸಲು ಮೀಮಾಂಸಾದರ್ಶನ ಪ್ರದರ್ಶಿಸಿರುವ ನ್ಯಾಯಗಳನ್ನು ಅನುಸರಿಸುವ ವಾಡಿಕೆ ಹಿಂದಿನಿಂದಲೂ ರೂಢಿಯಲ್ಲಿತ್ತು. ವೇದಗಳಲ್ಲಿ ಮೊದಲು ಬರುವ ಕರ್ಮಕಾಂಡದ ವಿವೇಚನೆಯಾದ ಈ ದರ್ಶನವನ್ನು ಪೂರ್ವಮೀಮಾಂಸೆಯೆಂದೂ ಅನಂತರ ಬರುವ ಜ್ಞಾನಕಾಂಡದ ವಿವೇಚನೆಯಾದ ವೇದಾಂತದರ್ಶನವನ್ನು ಉತ್ತರಮೀಮಾಂಸೆಯೆಂದೂ ಸಾಮಾನ್ಯವಾಗಿ ವ್ಯವಹರಿಸಲಾಗುತ್ತದೆ.

	ಪೂರ್ವಮೀಮಾಂಸಾದರ್ಶನದ ಆಧಾರಗ್ರಂಥಗಳಲ್ಲಿ ಪ್ರಥಮ ಸ್ಥಾನ ಜೈಮಿನಿಯ ಪೂರ್ವಮೀಮಾಂಸಾಸೂತ್ರಕ್ಕೆ ಸಲ್ಲುತ್ತದೆ. ದರ್ಶನಸೂತ್ರಗಳಲ್ಲೆಲ್ಲ ಇದೇ ದೊಡ್ಡದು. ಇದಕ್ಕೆ ಮೊದಲು ಭಾಷ್ಯ ಬರೆದಾತನೇ ಶಬರಸ್ವಾಮಿ (ಕ್ರಿ.ಶ.ಸು. 400). ಈ ಭಾಷ್ಯ ಸತ್ತ್ವಪೂರ್ಣ ಹಾಗೂ ಶಾಸ್ತ್ರೀಯ ಗದ್ಯಶೈಲಿಗೆ ಉತ್ತಮ ಉದಾಹರಣೆಯಂತಿದೆ. ಇದರ ವಿವರಣಾಕಾರರಲ್ಲಿ ಪ್ರಮುಖರಾದ ಕುಮಾರಿಲಭಟ್ಟ (ಕ್ರಿ.ಶ. 700) ಹಾಗೂ ಪ್ರಭಾಕರ (ಕ್ರಿ.ಶ. 650) ಇವರಿಬ್ಬರ ಪರಸ್ಪರ ಮತಭೇದದಿಂದ ಪೂರ್ವಮೀಮಾಂಸಾದರ್ಶನದಲ್ಲಿ ಭಾಟ್ಟ, ಪ್ರಾಭಾಕರ ಎಂಬ ಎರಡು ಶಾಖೆಗಳಾದವು. ಶ್ಲೋಕವಾರ್ತಿಕ, ತಂತ್ರವಾರ್ತಿಕ ಮತ್ತು ಟುಪ್-ಟೀಕಾ ಎಂಬವು ಕುಮಾರಿಲ ಭಟ್ಟರ ಮುಖ್ಯ ಗ್ರಂಥಗಳು. ಪ್ರಭಾಕರನ ವಿವರಣೆಯ ಹೆಸರು ಬೃಹತೀ. ಮುಂದೆ ಮಂಡನಮಿಶ್ರ, ವಾಚಸ್ಪತಿಮಿಶ್ರ, ಪಾರ್ಥಸಾರಥಿಮಿಶ್ರ, ಮಾಧವಾಚಾರ್ಯ, ಖಂಡದೇವ ಮುಂತಾದ ಮಹಾಮೇಧಾವಿಗಳು ಭಾಟ್ಟ ದರ್ಶನವನ್ನು ಬೆಳೆಸಿ ಅದಕ್ಕೆ ಪ್ರತಿಷ್ಠೆಯನ್ನೊದಗಿಸಿದರು. ಆದರೆ, ಪ್ರಾಭಾಕರ ದರ್ಶನವನ್ನು ಬೆಳೆಸಿದವರಲ್ಲಿ ಶಾಲಿಕಾನಾಥನೊಬ್ಬನೆ ಗಮನಾರ್ಹ. ಮಿಕ್ಕವರು ಪ್ರಬಲರಲ್ಲವಾದ್ದರಿಂದ ಅದರ ಮಹತ್ತ್ವ ಕಾಲಾಂತರದಲ್ಲಿ ಕಡಿಮೆಯಾಯಿತು.

	ಈಗ ಪೂರ್ವಮೀಮಾಂಸಾದರ್ಶನದ ಮುಖ್ಯ ಸಿದ್ಧಾಂತಗಳನ್ನು ಇಲ್ಲಿ ಸಂಗ್ರಹವಾಗಿ ಸೂಚಿಸಬಹುದು : 1. ವೇದವಾಕ್ಯಗಳೆಲ್ಲ ವಿಧಿಪರ ಇಲ್ಲವೆ ನಿಷೇಧಪರವಾಗಿರುತ್ತವೆ. ಮೇಲ್ನೋಟಕ್ಕೆ ಹಾಗೆ ಕಾಣದ ವಾಕ್ಯಗಳಿಗೂ ವಿಧಿ ಇಲ್ಲವೆ ನಿಷೇಧವೇ ಶಾತ್ಪರ್ಯಾರ್ಥವಾಗುವಂತೆ ಅರ್ಥೈಸಬೇಕು. ಸಿದ್ಧ ವಿಷಯಗಳನ್ನು ಹೇಳಲು ಲೌಕಿಕ ವಾಕ್ಯಗಳಿಗೆ ಸಾಮಥ್ರ್ಯವಿದೆ, ವೇದ ವಾಕ್ಯಗಳ ವ್ಯಾಪ್ತಿ ಅದಕ್ಕಿಂತ ಭಿನ್ನವಾದ ಅತೀಂದ್ರೀಯ ಧಾರ್ಮಿಕ ವಿಷಯಗಳಿಗೆ ಮಾತ್ರ ಸೀಮಿತವೆಂದರಿಯಬೇಕು. 2. ವಿಧಿ ಇಲ್ಲವೆ ನಿಷೇಧವನ್ನು ನೇರವಾಗಿ ಬೋಧಿಸದ ವೇದವಾಕ್ಯಗಳಿಗೆಲ್ಲ ಪರ್ಯಾಯವಾಗಿ ವಿಧಿಪ್ರಶಂಸೆಯಲ್ಲೆ ತಾತ್ಪರ್ಯವೆನ್ನಬೇಕು. ಅಂಥ ಪ್ರಶಂಸಾವಾಕ್ಯಗಳೇ ಅರ್ಥವಾದಗಳು. 3. ವೇದೋಕ್ತ ಕರ್ಮಗಳ ಅನುಷ್ಠಾನದಿಂದ ಅಪೂರ್ವ ಅಥವಾ ಅದೃಷ್ಟ ಹುಟ್ಟು ಉಕ್ತ ಫಲಗಳನ್ನು ಜನ್ಮಾಂತರದಲ್ಲಾದರೂ ಕೊಟ್ಟೇ ತೀರುವುದು. ಹೀಗೆ ಅದೃಷ್ಟದ ಶಕ್ತಿ ಅನಂತವಾಗಿರುವುದರಿಂದ ದೇವರನ್ನು ಕಲ್ಪಿಸದಿದ್ದರೂ ನಡೆಯುತ್ತದೆ. 4. ಈ ಜಗತ್ತು ಎಂದೆಂದೂ ಹೀಗೆಯೇ ಇದೆ : ಆದ್ದರಿಂದ ದೇವರು ಇದನ್ನು ಎಂದೋ ಒಮ್ಮೆ ಸೃಷ್ಟಿಸಿದನೆಂದು ಕಲ್ಪಿಸುವುದೂ ಅನಗತ್ಯ. 5. ಯಜ್ಞಗಳನ್ನು ಸಾಂಗೋಪಾಂಗವಾಗಿ ಆಚರಿಸಲು ಅಗತ್ಯವಿರುವ ಎಲ್ಲ ವಿಚಾರ ಸಾಮಗ್ರಿಯನ್ನೂ ಈ ಶಾಸ್ತ್ರದಲ್ಲಿ ಕಾಣಬಹುದು. ಯಜ್ಞಾಚರಣೆಯಿಂದ ಬರತಕ್ಕದ್ದೇ ಧರ್ಮ; ಅದನ್ನು ವಿಧಿಸುವ ಶಾಸ್ತ್ರವೇ ವೇದವಾಕ್ಯ. ಧರ್ಮವನ್ನು ಪ್ರತ್ಯಕ್ಷ, ಅನುಮಾನ, ಮುಂತಾದ ಮತ್ತಾವ ಪ್ರಮಾಣಗಳಿಂದಲೂ ತಿಳಿಯಲು ಬರುವುದಿಲ್ಲ. ಆದ್ದರಿಂದ ಶಬ್ದ ಅಥವಾ ವೇದವೇ ಪರಮಪ್ರಮಾಣ. ವೇದ ಪರಮಪ್ರಮಾಣವಾಗಲು ಅದರ ನಿತ್ಯತ್ವ ಹಾಗೂ ಅಪೌರುಷೆಯತ್ವಗಳೇ ಕಾರಣ. ಋಷಿಗಳು ವೇದಮಂತ್ರಗಳ ದ್ರಷ್ಟಾರರೇ ಹೊರತು ಕರ್ತಾರರಲ್ಲ. ವೇದಗಳ ಮಂತ್ರಗಳಂತೆ ಆ ವಾಕ್ಯಗಳ ಅನುಪೂರ್ವಿ ಕೂಡ ನಿತ್ಯ; ಅದನ್ನು ಪರಿವರ್ತಿಸಲುಬಾರದು. ವೇದ ಧರ್ಮ-ವಿಷಯ ಮಾತ್ರ ಪರಮಪ್ರಮಾಣವೆನ್ನುವುದರಿಂದ ಧರ್ಮಕ್ಕೆ ಸಂಬಂಧಿಸದ ಲೌಕಿಕ ವಿಷಯದಲ್ಲಿ ಪ್ರತ್ಯಕ್ಷಾದಿಗಳೇ ಪರಮಪ್ರಮಾಣವಾಗಿ ಉಳಿಯುತ್ತವೆ. ಪರಸ್ಪರ ವಿರೋಧಕ್ಕೆ ಅವಕಾಶವೇ ಇಲ್ಲ. ಕರ್ಮಕ್ಕೆ ಇಷ್ಟಸಾಧನತಾಜ್ಞಾನ ಅಥವಾ ಪ್ರಯೋಜನಾಪೇಕ್ಷೆಯೂ ಪ್ರಚೋದಕವೆಂದು ಭಾಟ್ಟರು ಹೇಳಿದರೆ, ಕೇವಲ ಕರ್ತವ್ಯತಾಜ್ಞಾನದಷ್ಟೇ ಪ್ರಯೋಜನಾಪೇಕ್ಷೆಯೂ ಪ್ರಚೋದಕವೆಂದು ಪ್ರಾಭಾಕರರು ಭಾವಿಸುತ್ತಾರೆ. 6. ಪೂರ್ವಮೀಮಾಂಸಕರು ಒಪ್ಪುವ ಪ್ರಮಾಣಗಳು ಆರು : ಪ್ರತ್ಯಕ್ಷ, ಅನುಮಾನ ಶಬ್ದ, ಉಪಮಾನ, ಅರ್ಥಾಪತ್ತಿ ಮತ್ತು ಅಭಾವ. 7. ಆತ್ಮನ ಕ್ರಿಯೆಯ ಮೀಮಾಂಸಕರಿಗೆ ಜ್ಞಾನ, ತಾರ್ಕಿಕರು ಹೇಳುವಂತೆ ಅದು ಆತ್ಮನ ಗುಣವಲ್ಲ. 8. ಜ್ಞಾನವೆಲ್ಲ ಸ್ವತಃ ಪ್ರಮಾಣ. ತಾರ್ಕಿಕರೆನ್ನುವಂತೆ ಪರತಃಪ್ರಮಾಣವಲ್ಲ. 9. ಆತ್ಮಜ್ಞಾನದ ಕರ್ತಾರನೂ ಹೌದು, ವಿಷಯನೂ ಹೌದು (ಕುಮಾರಿಲನ ಮತದಂತೆ); ಆದರೆ ಪ್ರಭಾಕರನ ಮತದಂತೆ ನಾನು ಎಂಬ ಪ್ರತೀತಿಯಿಂದ ವೇದ್ಯ. 10. ವೇದವಾಕ್ಯದಲ್ಲಿ ಅಂತರ್ಗತವಾಗಿರುವ ವಿಧಿವಿಷಯಕ ಪ್ರಚೋದಕತ್ವವನ್ನೆ ಈ ಶಾಸ್ತ್ರದಲ್ಲಿ ಭಾವನಾ ಎನ್ನಲಾಗುತ್ತದೆ. 11. ಧರ್ಮಾಚರಣೆಯಿಂದ ಆತ್ಮಸುಷ್ಟಿ ಲಭಿಸುತ್ತದೆ. 12. ಪ್ರಪಂಚದ ಸಂಬಂಧದ ನಾಶವೇ ಮೀಮಾಂಸದರ್ಶನದಲ್ಲಿ ಮೋಕ್ಷವೆನಿಸುತ್ತದೆ; ಕಾಮ್ಯ ಹಾಗೂ ನಿಷಿದ್ಧ ಕರ್ಮಗಳಲ್ಲಿ ನಿವೃತ್ತಿ, ನಿತ್ಯಕರ್ಮಗಳಲ್ಲಿ ಪ್ರವೃತ್ತಿ-ಇವೇ ಮೋಕ್ಷ ಸಾಧನೆಗಳು.															(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ